ಜನಮನ ಸೂರೆಗೊಂಡ ಗದಗ ಕನ್ನಡ ಸಾಹಿತ್ಯ ಸಮ್ಮೇಳನ
   
೭೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ವರದಿ
   
ವರದಿ:ಕೋ.ವೆಂ. ರಾಮಕೃಷ್ಣೇಗೌಡ.
ಸಂಪಾದಕರು, ಕನ್ನಡನುಡಿ.  
     
ಅಖಿಲ ಭಾರತ ಎಪ್ಪತ್ತಾರನೆಯ ಸಮ್ಮೇಳನ ಗದಗಿನಲ್ಲಿ ನಡೆಯುವುದೇ ಎಂಬ ಪ್ರಶ್ನೆ ಸಮ್ಮೇಳನದ ಹಿಂದಿನ ಒಂದು ವಾರದವರೆಗೂ ಏಳುತ್ತಲೇ ಇತ್ತು. ಸಮ್ಮೇಳನ ನಡೆದರೂ ಅಧ್ವಾನಗೊಳ್ಳುವುದಂತೂ ಖಂಡಿತ ಎಂದು ಕೆಲವರು ಖಂಡತುಂಡವಾಗಿ ಹೇಳುವ ಹಂತಕ್ಕೂ ಹೋಗಿದ್ದುಂಟು. ಆದರೆ ಸಮ್ಮೇಳನದ ಯಶಸ್ಸು ಅಂಥವರ ಬಾಯಿ ಮುಚ್ಚಿಸಿದೆ. ಸಮ್ಮೇಳನದಲ್ಲಿ ಪಾಲ್ಗೊಂಡ ಜನಸಾಗರ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕನ್ನಡಿಗರು ತಮ್ಮ ಎಲ್ಲಾ ಬಗೆಯ ಭೇದಗಳನ್ನು ಮರೆತು ಭಾಷೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಹೇಗೆ ಬೆರೆಯುತ್ತಾರೆ ಎಂಬುದಕ್ಕೆ ಗದಗ ಸಮ್ಮೇಳನ ಉದಾಹರಣೆಯಾಗಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ಜನರ ಸಂಕಟದ ನಡುವೆಯೇ ನಡೆದ ಸಮ್ಮೇಳನಕ್ಕೆ ಅಭೂತಪೂರ್ವ ಬೆಂಬಲವನ್ನು ಜನಸಾಮಾನ್ಯರು ನೀಡಿದ್ದಾರೆ.
ಕನ್ನಡಕ್ಕಿರುವ ದೊಡ್ಡಶಕ್ತಿಯೆಂದರೆ ಜನರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವುದು. ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಸಾವಿರಾರು ಜನರು ಕುಳಿತು ಪ್ರಬಂಧಕಾರರ ವಿಷಯಗಳನ್ನು ಆಲಿಸುತ್ತಾರೆ ಎಂಬುದೇ ಸೋಜಿಗದ ಸಂಗತಿ. ಏಕೆಂದರೆ ಜನರು ಯಾವುದೇ ರಾಜಕೀಯ ನಾಯಕರ ಹಿಂಬಾಲಕರಾಗಿರುವುದಿಲ್ಲ. ಯಾವುದೇ ಮಠದ ಭಕ್ತ ಸಮೂಹವೂ ಅಲ್ಲ. ಈ ಎಲ್ಲವನ್ನೂ ಮೀರಿ ವಿದ್ವಾಂಸರ, ಚಿಂತಕರ ವಿಚಾರಪೂರ್ಣ ಮಾತುಗಳನ್ನು ಆಲಿಸಿ, ತಮಗೆ ಇಷ್ಟವಾದಾಗ ಚಪ್ಪಾಳೆ ತಟ್ಟಿಯೋ, ಶಿಳ್ಳೆ ಹಾಕಿಯೋ ಮೆಚ್ಚುಗೆ ಸೂಚಿಸಿದ್ದನ್ನು ಸಮ್ಮೇಳನದ ಮಂಟಪದಲ್ಲಿ ಎಲ್ಲರೂ ಕಂಡಿದ್ದಾರೆ. ಗೋಷ್ಠಿಗಳು, ಸಾಂಸ್ಕೃತಿಕ ಸಮಾಗಮ, ಊಟದ ಅಚ್ಚುಕಟ್ಟು, ಆಯೋಜನೆಗಳಿಂದಾಗಿ ಗದಗ ಸಮ್ಮೇಳನ ಜನಮನವನ್ನು ಸೂರೆಗೊಂಡಿತು.
ಗದಗಿನ ವಿದ್ಯಾದಾನ ಸಮಿತಿ ಪದವಿಪೂರ್ವ ಕಾಲೇಜು ಮೈದಾನವು ೨೦೧೦ ಫೆಬ್ರವರಿ ೧೯, ೨೦ ಮತ್ತು ೨೧ ಮೂರು ದಿನಗಳು ಕನ್ನಡಮ್ಮನ ಜಾತ್ರೆಯೋಪಾದಿಯಲ್ಲಿ ನಡೆದ ಅಖಿಲ ಭಾರತ ಎಪ್ಪತ್ತಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳವಾಗಿ ಇತಿಹಾಸದ ಪುಟವನ್ನು ಸೇರಿತು. ಕರ್ನಾಟಕದ ದಿಟ್ಟ ಸಾಹಿತಿ ನಾಡೋಜ ಡಾ. ಗೀತಾ ನಾಗಭೂಷಣ ಅವರು ಸಮ್ಮೇಳನಾಧ್ಯಕ್ಷರಾಗಿ ವಿರಾಜಮಾನರಾದುದು ಸಮ್ಮೇಳನಕ್ಕೆ ಮತ್ತೊಂದು ಗರಿ ಮೂಡಿದಂತಾಯಿತು.
   
ಕುಮಾರವ್ಯಾಸನ ಆಡುಂಬೊಲವಾದ ಗದಗದ ಸಮ್ಮೇಳನದ ಮಹಾಮಂಟಪಕ್ಕೆ ಸಹಜವಾಗಿ ಕುಮಾರವ್ಯಾಸನ ಹೆಸರು ಒಪ್ಪುವಂತಿತ್ತು. ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಗೆ ಕಳಶವಿಟ್ಟು ಹತ್ತನೇ ಶತಮಾನದಲ್ಲಿ ಬಾಳಿದ ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರನ್ನು ಪ್ರಧಾನ ವೇದಿಕೆಗೆ ನೀಡಿದ್ದುದು ಔಚಿತ್ಯಪೂರ್ಣವಾಗಿತ್ತು. ದುರ್ಗಸಿಂಹ, ನಾಗವರ್ಮ, ನಯಸೇನ, ಚಾಮರಸ, ಅಜಗಣ್ಣ, ಮುಕ್ತಾಯಕ್ಕ, ಹುಯಿಲಗೋಳ ನಾರಾಯಣರಾಯ, ದೊಡ್ಡಮೇಟಿ ಅಂದಾನಪ್ಪ, ಆಲೂರು ವೆಂಕಟರಾವ್, ಎಚ್.ಎನ್. ಹೂಗಾರ್, ರಂ.ಶ್ರೀ. ಮುಗಳಿ, ಪಂ. ಪಂಚಾಕ್ಷರಿ ಗವಾಯಿ, ಸಿದ್ಧನಗೌಡ ಪಾಟೀಲ, ಮೇವುಂಡಿ ಮಲ್ಲಾರಿ ಮೊದಲಾದ ಕವಿಗಳು, ವಚನಕಾರರು, ಕನ್ನಡಪರ-ಜನಪರ ಹೋರಾಟಗಾರರು, ಸಂಗೀತ ದಿಗ್ಗಜರು, ಇತಿಹಾಸ ಪುರುಷರ ದ್ವಾರಗಳ ಬೆಳಕಿನಲ್ಲಿ ಧ್ವಜಾರೋಹಣದೊಡನೆ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ನಂತರ ಸಮ್ಮೇಳನಾಧ್ಯಕ್ಷರನ್ನು ಪೂರ್ಣಕುಂಭದೊಡನೆ ಸ್ವಾಗತಿಸಲಾಯಿತು. ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಜಯಶ್ರೀ ಉಗಲಾಟದ ಅವರು ಉಪಸ್ಥಿತರಿದ್ದು ಗೀತಾ ನಾಭೂಷಣ ಅವರನ್ನು ಬರಮಾಡಿಕೊಂಡರು. ಯಡಿಯೂರು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿ. ಶ್ರೀರಾಮುಲು ಸಮ್ಮೇಳನವನ್ನು ಉದ್ಘಾಟಿಸಿ ಸಾಹಿತ್ಯ ಭವನದ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಲಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಅವರು ಆಶಯ ಭಾಷಣವನ್ನು ಮಾಡಿ, ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸಿದರು. ಡಾ. ಹಂ.ಪ. ನಾಗರಾಜಯ್ಯ ಅವರು ಪರಿಷತ್ತಿನ ಪ್ರಕಟಣೆಗಳನ್ನು, ನಾಡೋಜ ಚನ್ನವೀರ ಕಣವಿ ಸ್ಮರಣ ಸಂಚಿಕೆಯನ್ನು, ಶಾಸಕ ಶ್ರೀಶೈಲಪ್ಪ ಬಿದರೂರ ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಲ್. ಭೈರಪ್ಪ ಕಲಾಪ್ರದರ್ಶನವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾದ ಸಿ.ಸಿ. ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದೀಗೌಡರ, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಆರ್. ಜಯರಾಮರಾಜೇ ಅರಸ್, ನಿರ್ದೇಶಕರಾದ ಮನು ಬಳಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಡಾ. ಗೀತಾ ನಾಗಭೂಷಣ ಅವರು ತಮ್ಮ ಭಾಷಣದ ಉದ್ದಕ್ಕೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಮಾಡಿದರು. ಜಾಗತೀಕರಣದ ದುಷ್ಪರಿಣಾಮ, ಮಹಿಳೆಯರ ನಿರಂತರ ಶೋಷಣೆ, ಸಾಹಿತ್ಯದಲ್ಲಿ ಮಹತ್ವ ಪಡೆಯುತ್ತಿರುವ ಶಬ್ದಾಡಂಬರದ ಪರಿಣಾಮ, ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರ ಸಾಹಿತ್ಯ ಶ್ರೇಷ್ಠತೆಯ ಗುಣಗಾನ, ಗ್ರಾಮೀಣ ರೈತಾಪಿಗಳ, ಕೃಷಿಕಾರ್ಮಿಕರ ಶೋಷಣೆ, ದೀನ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಕೋಮುದ್ವೇಷ, ಧಾರ್ಮಿಕ ಅಸಹನೆಯಿಂದ ಸಮಾಜದ ಮೇಲುಂಟಾಗುತ್ತಿರುವ ದುಷ್ಪರಿಣಾಮಗಳ ಕಡೆಗೆ ಗಮನ ಸೆಳೆದರು.
   
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಮೊದಲ ಗೋಷ್ಠಿ ‘ಕನ್ನಡ ಭಾಷೆ’ ಕುರಿತು ಚಿಂಚನೆ ನಡೆಯಿತು. ಸತೀಶ್ ಕುಲಕರ್ಣಿ, ಅವರು ಆಶಯ ಭಾಷಣ ಮಾಡಿದರು. ಡಾ. ಕಿಕ್ಕೇರಿ ನಾರಾಯಣ ‘ಶಾಸ್ತ್ರೀಯ ಭಾಷೆಯ ಇಂದಿನ ಬಿಕ್ಕಟ್ಟುಗಳು’, ಡಾ. ಸ್ವಾಮಿರಾವ್ ಕುಲಕರ್ಣಿ ‘ಆಡಳಿತ ಮತ್ತು ಶಿಕ್ಷಣದಲ್ಲಿ ಕನ್ನಡ ಅನುಷ್ಠಾನದ ಸ್ಥಿತಿಗತಿ’, ಡಾ. ಜಿ.ಬಿ. ಹರೀಶ್ ‘ಈ ಜಗತ್ತಿನಲ್ಲಿ ‘ಇ’ ಕನ್ನಡ ಕುರಿತು ಪ್ರಬಂಧಗಳನ್ನು ಮಂಡಿಸಿದರು. ‘ಒಕ್ಕೂಟ ವ್ಯವಸ್ಥೆ-ಪ್ರಾಂತೀಯತೆ’ ವಿಷಯದ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಕೆ. ಮರುಳಸಿದ್ಧಪ್ಪ ವಹಿಸಿದ್ದರು ಪ್ರೇಮಕುಮಾರ ಹರಿಯಬ್ಬೆ ಆಶಯ ಭಾಷಣ ಮಾಡಿದರು. ಡಾ. ಪಿ.ವಿ. ನಾರಾಯಣ ‘ಪ್ರಾಂತೀಯತೆ ಹಾಗೂ ಪ್ರತ್ಯೇಕತೆಯ ಕೂಗು’, ಡಾ. ವಿಠ್ಠಲ ಭಂಡಾರಿ ‘ಪ್ರಾದೇಶಿಕ ಪಕ್ಷಗಳು-ಒಕ್ಕೂಟ ವ್ಯವಸ್ಥೆ’, ಲಕ್ಷ್ಮೀನಾರಾಯಣ ನಾಗವಾರ ‘ಒಕ್ಕೂಟ ವ್ಯವಸ್ಥೆ ಮತ್ತು ಮೈತ್ರಿ ಸರ್ಕಾರಗಳು’ ಕುರಿತು ಪ್ರಬಂಧ ಮಂಡಿಸಿದರು. ‘ಬೇಸಾಯ ಮತ್ತು ಬದುಕು’ ಹೆಸರಿನ ಮೂರನೆಯ ಗೋಷ್ಠಿಯ ಆಶಯ ಭಾಷಣವನ್ನು ಈರಯ್ಯ ಕಿಲ್ಲೇದಾರ ಮಾಡಿದರು. ಕಡಿದಾಳು ಶಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ‘ಜಾಗತೀಕರಣ ಮತ್ತು ರೈತ ಹೋರಾಟ’, ಬಿ. ಅನಸೂಯಮ್ಮ ‘ಬೇಸಾಯ ಮತ್ತು ಮಹಿಳೆ’ ವಿಷಯವಾಗಿ ಮಾತನಾಡಿದರು. ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಲ್ಲಮಪ್ರಭು ಬೆಟ್ಟದೂರ ಆಶಯ ಮಾತುಗಳನ್ನಾಡಿದರು. ಡಾ. ಎಚ್.ಎಲ್. ಪುಷ್ಪ, ಸುಬ್ಬು ಹೊಲೆಯಾರ್, ಬಿ.ಎಂ. ಹನೀಫ್, ಡಾ. ರಾಮಲಿಂಗಪ್ಪ ಟಿ. ಬೇಗೂರು, ಲತಾಗುತ್ತಿ, ನಿರ್ಮಲಾ ಶೆಟ್ಟರ್, ಯಲ್ಲಪ್ಪ ಕ. ಹಲಕುರ್ಕಿ, ನಾಗೇಶ್ ನಾಯಕ್, ಡಾ. ಜಯಪ್ರಕಾಶ ಮಾವಿನಕುಳಿ, ಡಾ. ವಿಕ್ರಮ ವಿಸಾಜಿ, ಸಂಗಮೇಶ ಉಪಾಸೆ. ಡಿ.ಎಸ್. ರಾಮಸ್ವಾಮಿ, ಮೋಹನ್ ಮಟ್ಟನವಿಲೆ, ಗಂಗಾರಾಂ ಚಂಡಾಳ, ಎಲ್. ಗಿರಿಜಾರಾಜ್, ಡಾ. ಕೆ. ಶರೀಫಾ, ಶಂಕರ ಬೈಚಬಾಳ, ಕೆ.ಎಂ. ನಾಗಲಕ್ಷ್ಮಿ ವೀರೇಶ್, ಶರಣು ಹುಲ್ಲೂರ, ಕಮಲಾ ಹೆಮ್ಮಿಗೆ, ಡಾ. ಚಿಂತಾಮಣಿ ಕೊಡ್ಲೆಕೆರೆ, ಮಹಾಲಿಂಗ ಯಳಗಿ, ಮೀನಾ ಪಾಟೀಲ, ಡಾ. ಪ್ರೇಮಾ ಸಿರ್ಸೆ, ಚಂದ್ರಶೇಖರ ಹಿರೇಮಠ, ತಾ.ಸಿ. ತಿಮ್ಮಯ್ಯ, ಟಿ. ಯಲ್ಲಪ್ಪ, ಮಧುಸೂಧನ ಮದ್ದೂರು, ನಾಗತಿಹಳ್ಳಿ ರಮೇಶ್, ರವಿಶಂಕರ ವಡ್ಡಂಬೆಟ್ಟು ಕವಿತೆಗಳನ್ನು ವಾಚಿಸಿದರು.
   
ಸಮ್ಮೇಳನಾಧ್ಯಕ್ಷರಾದ ಡಾ. ಗೀತಾ ನಾಗಭೂಷಣ ಅವರೊಡನೆ ನಡೆದ ಸಂವಾದವನ್ನು ಡಾ. ಮೀನಾಕ್ಷಿ ಬಾಳಿ ನಡೆಸಿಕೊಟ್ಟರು. ಡಾ. ಸರಸ್ವತಿ ಚಿಮ್ಮಲಗಿ, ಅಡವಿರಾವ್ ಕುಲಕರ್ಣಿ, ಡಾ. ಎಚ್. ಶಶಿಕಲಾ, ಡಾ. ಜಯಲಕ್ಷ್ಮಿ ಸೀತಾಪುರ, ಡಾ. ಸಂಗಮೇಶ ತಮ್ಮನಗೌಡ್ರ, ಡಾ. ಬಿ.ಎನ್. ಪೂರ್ಣಿಮಾ, ಡಾ. ಎಚ್. ನರಸಿಂಹಯ್ಯ, ರಾಮಮೂರ್ತಿ ಎಸ್. ನಾಯಕ, ರುದ್ರಮ್ಮ ಹಾಸಿನಾಳ, ಮಹಾಬಲಮೂರ್ತಿ ಕೊಡ್ಲೆಕೆರೆ ಡಾ. ಎಲ್.ಜಿ. ಮೀರಾ ಸಂವಾದದಲ್ಲಿ ಭಾಗವಹಿಸಿದ್ದರು. ‘ಗದಗ ಜಿಲ್ಲಾ ಸಾಹಿತ್ಯ, ಸಂಸ್ಕೃತಿ, ಇತಿಹಾಸ’ ಗೋಷ್ಠಿಯಲ್ಲಿ ಡಾ. ಚಂದ್ರಶೇಖರ ವಸ್ತ್ರದ ಆಶಯ ಭಾಷಣ ಮಾಡಿದರು. ಮಾಧವ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಡಾ. ಎಚ್.ಬಿ. ಪೂಜಾರ ‘ಗದಗ ಜಿಲ್ಲಾ ಸಾಹಿತ್ಯ’, ಡಾ. ಬ.ಸೋ. ಗೊರವರ ‘ಜಿಲ್ಲೆಯ ಸಂಸ್ಕೃತಿ’, ಆರ್.ಎಂ. ಷಡಕ್ಷರಯ್ಯ ‘ಗದಗ ಜಿಲ್ಲೆ ಇತಿಹಾಸ’ ಕುರಿತು ಪ್ರಬಂಧ ಮಂಡಿಸಿದರು. ‘ಕಾವ್ಯ-ಗಾಯನ-ಕುಂಚ’ ಎಂಬ ವಿಭಿನ್ನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ವಹಿಸಿದ್ದರು. ಗಾಯನ ನಿರ್ದೇಶನವನ್ನು ವೈ.ಕೆ. ಮುದ್ದುಕೃಷ್ಣ ಮಾಡಿದ್ದರು. ಬಿ.ಕೆ.ಎಸ್. ವರ್ಮ ಕುಂಚದಲ್ಲಿ ತಮ್ಮ ಕೈಚಳಕ ತೋರಿದರು. ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಪ್ರೊ. ಇಟಗಿ ಈರಣ್ಣ, ಶಶಿಕಲಾ ವೀರಯ್ಯಸ್ವಾಮಿ, ಸುಬ್ರಾಯ ಚೊಕ್ಕಾಡಿ, ಡಾ. ಚನ್ನಣ್ಣ ವಾಲೀಕಾರ, ವಿಷ್ಣುನಾಯಕ್ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು. ವೈ.ಕೆ. ಮುದ್ದುಕೃಷ್ಣ, ಪುತ್ತೂರು ನರಸಿಂಹನಾಯಕ್. ಕಿಕ್ಕೇರಿ ಕೃಷ್ಣಮೂರ್ತಿ, ರಮೇಶಚಂದ್ರ, ಮೃತ್ಯುಂಜಯ ದೊಡ್ಡವಾಡ, ಕೆ.ಎಸ್. ಸುರೇಖ, ಪಿ.ಎ. ಮಂಗಳಾರವಿ, ಎಸ್. ಸುನೀತ, ನಾಗಚಂದ್ರಿಕಾ ಭಟ್ ಕವನಗಳನ್ನು ಹಾಡಿದರು. ‘ಮಹಿಳೆ-ಸಮಸ್ಯೆ-ಸವಾಲು’ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಜಯಮಾಲಾ ವಹಿಸಿದ್ದರು. ಡಾ. ಮಲ್ಲಿಕಾ ಘಂಟಿ ಆಶಯ ಭಾಷಣವನ್ನು ಮಾಡಿದರು. ಕೆ.ಎಸ್. ವಿಮಲಾ ‘ಜಾಗತಿಕ ಸಮಸ್ಯೆಗಳು ಮತ್ತು ಮಹಿಳಾ ಹೋರಾಟಗಳು’, ಚಂಪಾವತಿ ‘ಹೊಸ ಉದ್ಯೋಗಾವಕಾಶಗಳಲ್ಲಿ ಮಹಿಳೆ’, ಸಿ.ಜಿ. ಮಂಜುಳಾ ‘ಮಹಿಳೆ ಮತ್ತು ಸಿನೆಮಾ ಜಗತ್ತು’ ವಿಷಯ ಕುರಿತು ಮಾತನಾಡಿದರು. Geetha Nagabhushan
   
ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ಡಾ. ಪುಟ್ಟರಾಜ ಗವಾಯಿ ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವೀರಣ್ಣ ಮತ್ತಿಕಟ್ಟಿ, ಚೆಲುವರಾಯಸ್ವಾಮಿ, ಬಸವರಾಜ ಬೊಮ್ಮಾಯಿ, ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಿದರು. ಪ್ರೊ. ಹ.ಕ. ರಾಜೇಗೌಡ, ಮಾರ್ಕಂಡಪುರಂ ಶ್ರೀನಿವಾಸ್, ಪ್ರೊ. ಚಂದ್ರಪ್ಪ, ಎಚ್.ಎಸ್. ಸಿದ್ಧಯ್ಯ, ನಂಜಪ್ಪ ಕಲ್ಲುಮನೆ, ಜಗದಾತ್ಮನಂದಜೀ ಮಹಾರಾಜ್, ಡಾ. ಎಚ್.ಎ. ಪಾರ್ಶ್ವನಾಥ, ಡಾ. ಎಂ. ಪ್ರಭಾಕರ ಜೋಶಿ, ಎ. ಈಶ್ವರಯ್ಯ, ಅಮರನಾಥ ಗೌಡ,. ಬಿ.ಎಸ್. ಗವಿಮಠ, ಜಿ.ಬಿ. ಅಣ್ಣಿಗೇರಿ, ಜಲವಹಳ್ಳಿ ವೆಂಕಟೇಶರಾವ್, ಶ್ರೀನಿವಾಸ ಜಿ. ಕಪ್ಪಣ್ಣ, ಬಿ. ಶಂಕರಗೌಡ ಬೆಟ್ಟದೂರ, ಡಾ. ವಸುಂಧರಾ ಭೂಪತಿ, ಎಸ್.ಬಿ.ಪಾಟೀಲ ಗುಂಡೂರು, ಮಹೇಶ್‌ಬಾಬು ಸುರ್ವೆ, ಎಸ್. ಜಿತೇಂದ್ರಕುಮಾರ್, ಮಂಟಪ ಪ್ರಭಾಕರ ಉಪಾಧ್ಯ, ಬಸವರಾಜ ಮೇಲುಪ್ಪರಿಗೆಮಠ, ಸಿ.ವಿ. ಗೋಪಿನಾಥ್, ಡಾ. ಸಾಲೋಮನ್, ಬಿ.ಆರ್. ದತ್ತಾತ್ರೇಯಗೌಡ, ಎನ್.ವಿ. ಹರ್ಲಾಪುರ, ಜಗದೀಶರೆಡ್ಡಿ, ಸುಜ್ಞಾನಮೂರ್ತಿ, ಬಸವಲಿಂಗಯ್ಯ ಹಿರೇಮಠ, ಎಂ.ಆರ್. ಬಸಪ್ಪ, ಪ್ರೊ. ಬಿ.ಪಿ. ವೀರೇಂದ್ರಕುಮಾರ್, ಪ್ರೊ. ಬಿ.ವಿ. ಕೆರೆಮಾರ್ಕಂಡೇಯ, ಡಾ. ಬಿ.ಎಸ್. ಸ್ವಾಮಿ, ಮಹಾಂತಗುಲಗಂಜಿ, ಬಿ.ವಿ. ಪ್ರಕಾಶ್, ಬಾಲಕೃಷ್ಣ ಸಾಮಗ, ಪ್ರೊ. ಪ್ರಶಾಂತಮಾಡ್ತ, ವಾಸಣ್ಣದೇಸಾಯಿ, ಎಲ್ಲೇಗೌಡ ಬೆಸಗರಹಳ್ಳಿ, ಜ.ಹೊ. ನಾರಾಯಣಸ್ವಾಮಿ, ಬಾ. ರಾಮಚಂದ್ರ ಉಪಾಧ್ಯ, ಪ್ರೊ. ಬಿ. ನಾರಾಯಣಮ್ಮ, ಭೀಮೇಶ್ವರ ಜೋಶಿ, ಡಾ.ಪಿ.ವಿ. ಕೃಷ್ಣಮೂರ್ತಿ, ಎ.ಕೆ. ರಾಮೇಶ್ವರ, ಕನ್ನಡ ಹೋರಾಟಗಾರ ಎಲ್. ಶಿವಶಂಕರ್, ನಂಜುಂಡ ಮೈಮ್, ಎಚ್. ಶಕುಂತಲಾಭಟ್, ಪ್ರೊ. ಬಿ.ಎಂ. ಪುಟ್ಟಯ್ಯ, ಬಸವರಾಜಗವಿಮಠ, ಎನ್.ಆರ್. ಜ್ಞಾನಮೂರ್ತಿ, ವಿ.ಎಸ್.ಎಸ್. ಶಾಸ್ತ್ರಿ, ನರಸಿಂಹಮೂರ್ತಿ, ಕೆ. ಆನಂದ್, ಬಿ.ಎನ್. ರಾಮಸ್ವಾಮಿ, ಪ್ರೊ. ಬಿ.ವಿ. ಗುಂಜೆಟ್ಟಿ, ಬಿ.ಪಿ. ಹಿರೇಸೋಮಣ್ಣವರ, ಶರಣಪ್ಪಮಿಠಾರೆ, ಎಚ್. ಹಂಪನಗೌಡ, ಇಂದಿರಾಹಾಲಂಬಿ, ಎ.ಪಿ. ಕುಮಾರ್, ಸಿದ್ದಣ್ಣ ಉತ್ನಾಳ್, ಪ್ರೊ. ಬಿ.ಎಂ. ಹಿರೇಮಠ, ಎಂ.ಜಿ. ವಿದ್ಯಾಸಿಂಹಆಚಾರ್ಯ, ಪ್ರೊ. ಆರ್.ಕೆ. ಬೆಳ್ಳಿಗಟ್ಟಿ, ಬೆಳಗಲ್‌ವೀರಣ್ಣ, ಕಂಡಿಗೆಶಾಮಭಟ್ಟ, ಪಾರ್ವತಿಬಾಯಿ ಮಡಿವಾಳಪ್ಪಚಿನ್ಮಳ್ಳಿ ಅವರು ಸನ್ಮಾನವನ್ನು ಸ್ವೀಕರಿಸಿದರು. ಡಾ. ನಲ್ಲೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಪರಿಷತ್ತಿನ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರು ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇದುವರೆಗೆ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು’ಎಂಬ ಒಂದೇ ನಿರ್ಣಯವನ್ನು ಮಂಡಿಸಿದರು. ಕಾರ್ಯದರ್ಶಿಗಳಾದ ಟಿ.ಎಸ್. ದಕ್ಷಿಣಾಮೂರ್ತಿ ಸ್ವಾಗತಿಸಿ, ಪ್ರೊ. ಎಚ್.ಕೆ. ಮಳಲಿಗೌಡ ವಂದಿಸಿದರು. ಸಿ.ಕೆ.ರಾಮೇಗೌಡ, ಚಿ.ಮಾ.ಸುಧಾಕರ, ಬಿ.ಟಿ. ಚಿಕ್ಕಪುಟ್ಟೇಗೌಡ, ಕೆ.ಪ್ರಹ್ಲಾದರಾವ್, ಎಸ್.ವಿ.ನಾಗರಾಜರಾವ್, ಪ್ರೊ. ಡಿ.ಚಂದ್ರಪ್ಪ, ಕೆ.ಎಂ.ವೀರೇಶ್, ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಡಿ.ಮಂಜುನಾಥ್, ಮಡ್ಡೀಕೆರೆಗೋಪಾಲ್, ಎ.ಎಂ.ನಾಗಮಲ್ಲಪ್ಪ, ಡಾ.ಎಚ್.ಎಸ್. ಮುದ್ದೇಗೌಡ, ಉದಯರವಿ, ಟಿ.ಪಿ.ರಮೇಶ್, ಹೆಚ್.ಚಂದ್ರಪ್ಪ, ಅಂಬಾತನಯ ಮುದ್ರಾಡಿ, ಎಸ್.ಪ್ರದೀಪ ಕಲ್ಕ್ಕೂರ, ಬಸವರಾಜ ಜಗಜಂಪಿ, ಮಲ್ಲಿಕಾರ್ಜುನಅಯ್ಯಪ್ಪಯಂಡಿಗೇರಿ, ಎಸ್.ಜಿ.ಕೋಟಿ, ಡಾ. ದಾನಯ್ಯ ಮ.ಹಿರೇಮಠ, ಮಾರುತಿ ಶಿಡ್ಲಾಪುರ, ಎ.ಬಿ. ಹಿರೇಮಠ, ರೋಹಿದಾಸ ನಾಯಕ, ವೀರಭದ್ರ ಸಿಂಪಿ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಅಯ್ಯಪ್ಪ ತುಕ್ಕಾಯಿ, ಶೇಖರಗೌಡ ಮಾಲಿಪಾಟೀಲ, ನಿಷ್ಠಿ ರುದ್ರಪ್ಪ, ಗಡಿನಾಡು ಘಟಕಗಳ ಅಧ್ಯಕ್ಷರುಗಳಾದ ಎಚ್.ಬಿ.ಎಲ್. ರಾವ್, ಹೆಚ್.ರಾಮಚಂದ್ರಪ್ಪ, ಕೆ.ಪಿ.ಆಚಾರ್ಯ, ಸುಬ್ರಹ್ಮಣ್ಯ ವಿ.ಭಟ್, ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ), ಮೈಸೂರು ವಿ.ವಿ.ಪ್ರತಿನಿಧಿ ಡಾ. ಅಂಬಳಿಕೆ ಹಿರಿಯಣ್ಣ, ಮಂಗಳೂರು ವಿ.ವಿ.ಪ್ರತಿನಿಧಿ ಡಾ. ಕೆ.ಅಭಯಕುಮಾರ್, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ವಿಜಯಶ್ರೀ ಸಬರದ, ಪ್ರೊ. ಎನ್.ಚಂದ್ರಪ್ಪ, ಬಿ.ಎಚ್.ಸತೀಶ್‌ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   
ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮುಂಡರಗಿ ಸಂಸ್ಥಾನ ಮಠದ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಭಾವಹಿಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಕಾರ ನೀಡುವುದಾಗಿ ಹೇಳಿದರು. ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಮಾರೋಪ ಭಾಷಣವನ್ನು ಮಾಡಿದರು. ಸಮ್ಮೇಳನಾಧ್ಯಕ್ಷರಾದ ಡಾ. ಗೀತಾ ನಾಗಭೂಷಣ, ಪ್ರತಿಪಕ್ಷದ ನಾಯಕರಾದ ಸಿದ್ಧರಾಮಯ್ಯ ಮಾತನಾಡಿದರು. ಡಾ. ನಲ್ಲೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಮುರಿಗೆಪ್ಪ, ಸಚಿವರಾದ ಬಿ. ಶ್ರೀರಾಮುಲು, ಶಾಸಕರಾದ ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರು, ರಾಮಣ್ಣ ಲಮಾಣಿ, ಎಸ್.ಎಸ್. ಪಾಟೀಲ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಮಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
   
ಸಂ.ಶಿ. ಭೂಸನೂರು ಮಂಟಪದ ಬೆಟಗೇರಿ ಕೃಷ್ಣಶರ್ಮ ವೇದಿಕೆಯಲ್ಲಿ ನಡೆದ ಸಮಾನಾಂತರ ಗೋಷ್ಠಿಗಳಲ್ಲಿ ‘ಗದಗ ಜಿಲ್ಲೆ ಒಂದು ನೋಟ’ದ ಅಧ್ಯಕ್ಷತೆಯನ್ನು ಪ್ರೊ. ಸಿ.ವಿ. ಕೆರಿಮನಿ ವಹಿಸಿದ್ದರು. ಪ್ರೊ. ಸಿ.ವಿ. ಪಾಟೀಲ ಆಶಯ ಭಾಷಣ ಮಾಡಿದರು. ಪ್ರೊ. ಬಿ.ಎ. ಕೆಂಚರೆಡ್ಡಿ ‘ಹೊಸ ಜಿಲ್ಲೆಯಾಗಿ ಗದಗ’, ಡಾ. ಅರ್ಜುನ ಗೊಳಸಂಗಿ ‘ಗದಗ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಗಳು’, ಡಾ ಐ.ಜೆ. ಮ್ಯಾಗೇರಿ ‘ಜಿಲ್ಲೆಯ ಕೃಷಿ, ಕೈಗಾರಿಕೆ, ಭೂಹೀನರ ಬದುಕು’ ಕುರಿತು ಉಪನ್ಯಾಸ ಮಾಡಿದರು. ಡಾ. ಗಿರಡ್ಡಿ ಗೋವಿಂದರಾಜ ಅವರ ಅಧ್ಯಕ್ಷತೆಯಲ್ಲಿ ‘ಸಮಕಾಲೀನ ಸಾಹಿತ್ಯ, ಸೃಜನಶೀಲತೆ’ ಗೋಷ್ಠಿ ನಡೆದು ಡಿ.ಎಸ್. ನಾಗಭೂಷಣ ಆಶಯ ಭಾಷಣ ಮಾಡಿದರು. ಡಾ. ಹೇಮಾ ಪಟ್ಟಣಶೆಟ್ಟಿ ‘ಕಾವ್ಯ,’ ಡಾ. ತೇಜಸ್ವಿ ಕಟ್ಟೀಮನಿ ‘ಗದ್ಯ’, ಡಾ. ಮೊಗಳ್ಳಿ ಗಣೇಶ್ ‘ವಿಮರ್ಶೆ’ ಬಗೆಗೆ ಪ್ರಬಂಧ ಮಂಡಿಸಿದರು. ‘ಸಮ್ಮೇಳನಾಧ್ಯಕ್ಷರ ಸಾಹಿತ್ಯ’ ಗೋಷ್ಠಿಯಲ್ಲಿ ಪ್ರೊ. ಎಚ್.ಟಿ. ಪೋತೆ ಆಶಯ ಭಾಷಣ ಮಾಡಿದರು. ಡಾ. ಕಾಶಿನಾಥ ಅಂಬಲಗಿ ಅಧ್ಯಕ್ಷತೆಯಲ್ಲಿ ಶರಣಮ್ಮ ಗೊರೆಬಾಳ ‘ಸಣ್ಣಕತೆ’, ಡಾ. ಎಸ್. ಶಶಿರೇಖಾ ‘ಕಾದಂಬರಿಗಳು’, ಶಿವಾನಂದ ಕೆಳಗಿನಮನಿ ‘ರೇಡಿಯೋ ನಾಟಕಗಳು’ ಕುರಿತು ಉಪನ್ಯಾಸವನ್ನು ಮಾಡಿದರು. ‘ಮಕ್ಕಳ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕರವೀರಪ್ರಭು ಕ್ಯಾಲಕೊಂಡ ವಹಿಸಿದ್ದರು. ಕಂಚ್ಯಾಣಿ ಶರಣಪ್ಪ ಆಶಯ ನುಡಿಗಳನ್ನಾಡಿದರು. ಡಾ. ಲೀಲಾ ಸಂಪಿಗೆ ‘ಬಾಲಕಾರ್ಮಿಕರು-ಸಮಸ್ಯೆ, ಪರಿಹಾರ’, ಡಾ. ಕೆ.ಎ. ಅಶೋಕ ಪೈ ‘ಶೈಕ್ಷಣಿಕ ಒತ್ತಡದಲ್ಲಿ ಮಕ್ಕಳು’, ಪ್ರೊ. ಟಿ.ಎಸ್. ನಾಗರಾಜಶೆಟ್ಟಿ ‘ಕನ್ನಡದಲ್ಲಿ ಮಕ್ಕಳ ಸಾಹಿತ್ಯ’ ಕುರಿತು ಪ್ರಬಂಧ ಮಂಡಿಸಿದರು. ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ‘ಕಾವ್ಯ, ಗಮಕ-ಸುಗಮ ಸಂಗೀತ’ ಗೋಷ್ಠಿ ನಡೆಯಿತು. ಪ್ರೊ. ಹನುಮಣ್ಣನಾಯಕದೊರೆ ಆಶಯ ನುಡಿಗಳನ್ನಾಡಿದರು. ಡಾ. ಎಂ.ಆರ್. ಸತ್ಯನಾರಾಯಣ ‘ಕರ್ನಾಟಕದಲ್ಲಿ ಗಮಕ ಪರಂಪರೆ’, ಡಾ. ಎ.ವಿ. ಪ್ರಸನ್ನ ‘ಗದುಗಿನ ಭಾರತ ಮತ್ತು ಗಮಕ ಪರಂಪರೆ’, ಡಾ. ಎನ್. ರಘು ‘ಕರ್ನಾಟಕದಲ್ಲಿ ಸುಗಮ ಸಂಗೀತ ಪರಂಪರೆ’ ಪ್ರಬಂಧಗಳನ್ನು ಮಂಡಿಸಿದರು. ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ. ನಟರಾಜ ಹುಳಿಯಾರ್ ಆಶಯ ಭಾಷಣ ಮಾಡಿದರು. ಚಂದ್ರಶೇಖರ ಹಡಪದ, ಆರ್. ಹಂಸ, ಆರ್. ಚೌಡರೆಡ್ಡಿ, ಸಿ.ಬಿ. ಹನುಮಂತಪ್ಪ, ಗಂಗರಾಜು ಮಾಗಡಿ, ಡಾ. ಕೆ.ಎನ್. ಗುರುದತ್ತ, ಎಚ್. ನೀಲಪ್ಪ, ಮಂಜಣ್ಣ ಹೊಳಲ್ಕೆರೆ, ಮಹಮದ್ ಬಡ್ಡೂರು, ಡಾ. ಶೀರಗಾನಹಳ್ಳಿ ಶಾಂತಾನಾಯ್ಕ, ಟಿ. ಸತೀಶ್ ಜವರೇಗೌಡ, ಮಾರುತ ದಾಸಣ್ಣವರ, ತ.ರಾ.ಚಂದ್ರ, ಮರುಳಸಿದ್ಧಯ್ಯ ಪಾಟೀಲ್, ಗುರುರಾಜ ಮಾರ್ಪಳ್ಳಿ, ಗು.ಚಿ. ರಮೇಶ್, ಡಾ. ಗುಂಡಣ್ಣ ಕಲಬುರ್ಗಿ, ಪ್ರಭಾವತಿ ದೇಸಾಯಿ,ಸಿದ್ಧಲಿಂಗಸ್ವಾಮಿ ವಸ್ತ್ರದ, ದೇಶಪಾಂಡೆ ಸುಬ್ಬರಾವ್, ನಿಂಗಪ್ಪ ಚಳಗೇರಿ, ಎ.ಎಸ್. ಮಕಾಂದಾರ, ಬಸವನಗೌಡ ಪಾಟೀಲ, ಎಂ.ಕೆ. ಮೇಗಾಡಿ, ಎಸ್.ಪಿ. ಸುಳ್ಯಾದ, ವೀರ ಹನುಮಾನ್, ಅನಿಲ್‌ಕುಮಾರ್ ಅಣದುರೆ, ಹರಿನಾಥ ಬಾಬು, ಪದ್ಮಾ ವಿಠಲರಾವ್, ಸಿ. ಶಿವಣ್ಣ, ಡಾ. ನರೇಶ್ ಮುಳ್ಳೇರಿಯಾ, ಡಿ.ವಿ. ದಾಕ್ಷಾಯಿಣಿ, ಕುಮಾರ ಆಚಾರ್ಯ, ಶೋಭಾ ವಾಲೀಕಾರ, ವೇದಕುಮಾರ ಪ್ರಜಾಪತಿ, ಬಸವರಾಜ ಐನೊಳಿ ಕವನ ವಾಚನ ಮಾಡಿದರು. ‘ಕರ್ನಾಟಕ ಪರಿಸರ’ ಗೋಷ್ಠಿಯ ಆಶಯ ಭಾಷಣವನ್ನು ಪ್ರೊ. ಬಿ. ಗಂಗಾಧರಮೂರ್ತಿ ಮಾಡಿದರು. ಡಾ. ರಹಮತ್ ತರೀಕೆರೆ ‘ನೆರೆ ಸಂತ್ರಸ್ತರ ಬದುಕು-ಬವಣೆ’, ಸಿ. ಯತಿರಾಜ್ ‘ಕರ್ನಾಟಕ ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆ’, ಆರ್. ಮಂಜುನಾಥ ‘ನಗರಗಳ ಬೆಳವಣಿಗೆ-ಪರಸರ ನಾಶ’ ಕುರಿತು ಪ್ರಬಂಧ ಮಂಡಿಸಿದರು. ‘ಜಾನಪದ’ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಡಿ.ಕೆ. ರಾಜೇಂದ್ರ ವಹಿಸಿದ್ದರು. ಡಾ. ಡಿ.ಬಿ. ನಾಯಕ್ ಆಶಯ ನುಡಿಗಳನ್ನಾಡಿದರು. ಡಾ. ರಂಗಾರೆಡ್ಡಿ ಕೋಡಿರಾಂಪುರ ‘ಜಾನಪದ ಜಗತ್ತು ಮತ್ತು ಸಮೂಹ ಮಾಧ್ಯಮಗಳು’, ಡಾ. ಚಕ್ಕೆರೆ ಶಿವಶಂಕರ್ ‘ಜನಪದ ಕುಲಪುರಾಣಗಳು’ ಕುರಿತು ಪ್ರಬಂಧ ಮಂಡನೆ ಮಾಡಿದರು.